- UPSC Success Story: ಕೇವಲ 75 ಮನೆಗಳ ಈ ಪುಟ್ಟ ಹಳ್ಳಿ ದೇಶಕ್ಕೆ ಕೊಟ್ಟಿದೆ 51 IAS-IPS ಅಧಿಕಾರಿಗಳು!
ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಕರು UPSC ಪರೀಕ್ಷೆ ಬರೆದು IAS, IPS ಅಧಿಕಾರಿಗಳಾಗುವ ಕನಸು ಕಾಣುತ್ತಾರೆ. ದೆಹಲಿ, ಬೆಂಗಳೂರು, ಹೈದರಾಬಾದ್ನಂತಹ ನಗರಗಳಲ್ಲಿ ದುಬಾರಿ ಕೋಚಿಂಗ್ ಪಡೆದು ವರ್ಷಗಳ ಕಾಲ ತಯಾರಿ ನಡೆಸಿದರೂ ಯಶಸ್ಸು ಎಲ್ಲರ ಪಾಲಾಗುವುದಿಲ್ಲ. ಆದರೆ ಉತ್ತರ ಪ್ರದೇಶದ ಒಂದು ಪುಟ್ಟ ಹಳ್ಳಿ ಮಾತ್ರ ತನ್ನ ಅಚ್ಚರಿಯ ಸಾಧನೆಯ ಮೂಲಕ ಇಡೀ ದೇಶದ ಗಮನ ಸೆಳೆದಿದೆ.
ಉತ್ತರ ಪ್ರದೇಶದ ಜೌನಪುರ ಜಿಲ್ಲೆಯ ‘ಮಾಧೋಪಟ್ಟಿ’ ಗ್ರಾಮವನ್ನು ಇಂದು ದೇಶವೇ “IAS ಫ್ಯಾಕ್ಟರಿ” ಎಂದು ಕರೆಯುತ್ತಿದೆ. ಕೇವಲ 75 ಮನೆಗಳಿರುವ ಈ ಗ್ರಾಮ ಇದುವರೆಗೆ 51ಕ್ಕೂ ಹೆಚ್ಚು IAS ಮತ್ತು IPS ಅಧಿಕಾರಿಗಳನ್ನು ದೇಶಕ್ಕೆ ನೀಡಿರುವುದು ಅಚ್ಚರಿಯ ಸಂಗತಿ. ಈ ಗ್ರಾಮದ ಬಹುತೇಕ ಪ್ರತಿಯೊಂದು ಕುಟುಂಬದಲ್ಲೂ ಒಬ್ಬ ಅಧಿಕಾರಿ ಇದ್ದಾರೆ ಎಂಬ ಮಾತು ಅತಿಶಯೋಕ್ತಿಯಲ್ಲ.
ಒಂದೇ ಕುಟುಂಬದ ನಾಲ್ವರು IAS ಅಧಿಕಾರಿಗಳು
ಮಾಧೋಪಟ್ಟಿಯ ಹೆಗ್ಗಳಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ಒಂದೇ ಕುಟುಂಬದ ನಾಲ್ವರು ಸಹೋದರರು IAS ಅಧಿಕಾರಿಗಳಾದ ಘಟನೆ. ವಿನಯ್ ಕುಮಾರ್ ಸಿಂಗ್, ಛತ್ರಪಾಲ್ ಸಿಂಗ್, ಅಜಯ್ ಕುಮಾರ್ ಸಿಂಗ್ ಮತ್ತು ಶಶಿಕಾಂತ್ ಸಿಂಗ್ ಎಂಬ ನಾಲ್ವರು ಸಹೋದರರು UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ದೇಶದಾದ್ಯಂತ ಸುದ್ದಿಯಾಗಿದ್ದರು.
ಇವರಲ್ಲಿ ವಿನಯ್ ಕುಮಾರ್ ಸಿಂಗ್ ಅವರು ನಂತರ ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ಕುಟುಂಬದ ಸಾಧನೆ ಗ್ರಾಮದ ಇತರೆ ಯುವಕರಿಗೂ ದೊಡ್ಡ ಸ್ಪೂರ್ತಿಯಾಯಿತು. “ನಮ್ಮ ಊರಿನವರಿಂದ ಸಾಧ್ಯವಾದರೆ ನಮಗೂ ಸಾಧ್ಯ” ಎಂಬ ಆತ್ಮವಿಶ್ವಾಸ ಇಲ್ಲಿನ ಯುವಕರಲ್ಲಿ ಬೆಳೆದಿತು.
1914ರಿಂದಲೇ ಆರಂಭವಾದ ಯಶಸ್ಸಿನ ಪಯಣ
ಮಾಧೋಪಟ್ಟಿ ಗ್ರಾಮದ ಈ ಸಾಧನೆ ಇತ್ತೀಚಿನದಲ್ಲ. 1914ರಲ್ಲೇ ಮುಸ್ತಫಾ ಹುಸೇನ್ ಎಂಬುವವರು ಬ್ರಿಟಿಷ್ ಕಾಲದ ಸಿವಿಲ್ ಸರ್ವಿಸ್ ಸೇರುವ ಮೂಲಕ ಈ ಪರಂಪರೆಗೆ ಅಡಿಪಾಯ ಹಾಕಿದ್ದರು. ನಂತರ ಸ್ವಾತಂತ್ರ್ಯಾನಂತರ 1952ರಲ್ಲಿ ಇಂದು ಪ್ರಕಾಶ್ ಸಿಂಗ್ ಅವರು IFS ಅಧಿಕಾರಿಯಾಗಿ ಆಯ್ಕೆಯಾದರು.
ಆ ಬಳಿಕ ಈ ಗ್ರಾಮದ ಯುವಕರಲ್ಲಿ ನಾಗರಿಕ ಸೇವೆಗಳ ಬಗ್ಗೆ ಆಸಕ್ತಿ ಹೆಚ್ಚುತ್ತಾ ಬಂದಿತು. 2002ರಲ್ಲಿ ಅಮಿತಾಬ್ ಸಿಂಗ್ UPSCಯಲ್ಲಿ 298ನೇ ರ್ಯಾಂಕ್ ಪಡೆದು ಗ್ರಾಮದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದರು.
ಕೋಚಿಂಗ್ ಇಲ್ಲ.. ಆದರೆ ಆತ್ಮವಿಶ್ವಾಸ ಅಪಾರ!
ಇಂದಿನ ಕಾಲದಲ್ಲಿ UPSC ತಯಾರಿ ಎಂದರೆ ದುಬಾರಿ ಕೋಚಿಂಗ್ ಸೆಂಟರ್ಗಳು, ದೊಡ್ಡ ನಗರಗಳು ಮತ್ತು ಲಕ್ಷಾಂತರ ರೂಪಾಯಿ ವೆಚ್ಚ ಎಂಬ ಕಲ್ಪನೆ ಇದೆ. ಆದರೆ ಮಾಧೋಪಟ್ಟಿ ಗ್ರಾಮದಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನ.
ಇಲ್ಲಿ ದೊಡ್ಡ ಲೈಬ್ರರಿಗಳಿಲ್ಲ, ಆಧುನಿಕ ಕೋಚಿಂಗ್ ಸೆಂಟರ್ಗಳಿಲ್ಲ. ಆದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವವೇ ಇಲ್ಲಿನ ಯಶಸ್ಸಿನ ಮೂಲ ಕಾರಣವಾಗಿದೆ. ಗ್ರಾಮದಲ್ಲೇ ಹಲವು ಅಧಿಕಾರಿಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ನೇರ ಮಾರ್ಗದರ್ಶನ ದೊರೆಯುತ್ತದೆ.
ಪ್ರತಿ ಮನೆಯಲ್ಲೂ UPSC ಬಗ್ಗೆ ಚರ್ಚೆಯಾಗುವುದು ಇಲ್ಲಿನ ವಿಶೇಷತೆ. ಬಾಲ್ಯದಿಂದಲೇ ಅಧಿಕಾರಿಗಳನ್ನು ನೋಡಿ ಬೆಳೆದ ಮಕ್ಕಳಿಗೆ IAS ಅಥವಾ IPS ಆಗುವುದು ಅಸಾಧ್ಯ ಕನಸಾಗಿ ಕಾಣುವುದಿಲ್ಲ.
ISRO, BARC ಮತ್ತು World Bankಗೂ ಪ್ರತಿಭೆಗಳು
ಮಾಧೋಪಟ್ಟಿ ಗ್ರಾಮದ ಪ್ರತಿಭೆಗಳು ಕೇವಲ IAS ಅಥವಾ IPS ಹುದ್ದೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಗ್ರಾಮದ ಯುವಕರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO, BARC ಹಾಗೂ ವಿಶ್ವ ಬ್ಯಾಂಕ್ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ.
ಇದರಿಂದ ಈ ಗ್ರಾಮ ದೇಶದ ಅತ್ಯಂತ ಸ್ಪೂರ್ತಿದಾಯಕ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ದೇಶದ ಯುವಕರಿಗೆ ಸ್ಪೂರ್ತಿಯಾದ ಗ್ರಾಮ
ಮಾಧೋಪಟ್ಟಿ ಗ್ರಾಮದ ಯಶಸ್ಸು ಇಂದು UPSC ಕನಸು ಕಾಣುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಯಶಸ್ಸಿಗೆ ದುಬಾರಿ ಕೋಚಿಂಗ್ ಮಾತ್ರ ಮುಖ್ಯವಲ್ಲ; ಸರಿಯಾದ ಮಾರ್ಗದರ್ಶನ, ನಿರಂತರ ಪರಿಶ್ರಮ ಮತ್ತು ಉತ್ತಮ ಶೈಕ್ಷಣಿಕ ವಾತಾವರಣ ಇದ್ದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂಬುದನ್ನು ಈ ಪುಟ್ಟ ಗ್ರಾಮ ಸಾಬೀತುಪಡಿಸಿದೆ.
ಇದೀಗ ದೇಶದ ಹಲವಾರು ಭಾಗಗಳಿಂದ ಜನರು ಈ ಗ್ರಾಮವನ್ನು “IAS Village” ಎಂದು ಕರೆಯುತ್ತಿದ್ದು, ಇಲ್ಲಿನ ಯಶಸ್ಸಿನ ರಹಸ್ಯ ತಿಳಿಯಲು ಆಸಕ್ತಿ ತೋರಿಸುತ್ತಿದ್ದಾರೆ.